ಶಾಸಕರಿಂದ ಗುತ್ತಿಗೆ ಪೂಜೆ ನಡೆದು ತಿಂಗಳಾದರೂ ನಡೆಯದ ಮಡಿಕೇರಿ-ಗಾಳಿಬೀಡು ರಸ್ತೆ ಕಾಮಗಾರಿ : ಗುತ್ತಿಗೆದಾರನ ನಿರ್ಲಕ್ಷ್ಯ
🖋️ಚಂದನ್ ನಂದರಬೆಟ್ಟು
ಗಾಳಿಬೀಡು ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದನ್ನು ಗಮನಿಸಿ ಶಾಸಕರಾದ ಮಂತರ್ ಗೌಡ ಅವರು ತಿಂಗಳ ಹಿಂದೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮರುದಿನವೇ ಕೆಲಸ ಆರಂಭಿಸುವಂತೆ ಆದೇಶ ನೀಡಿದ್ದರು.
ಶಾಸಕರು ಗುದ್ದಲಿ ಪೂಜೆ ನಡೆಸಿ ಹೋದ ಬಳಿಕ ಒಂದೇ ವಾರದಲ್ಲಿ ಕೆಲಸ ಆರಂಭಿಸುವುದಾಗಿ ಮಾಹಿತಿ ನೀಡಿದ್ದ ಗುತ್ತಿಗೆದಾರ, ಬಳಿಕ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಇನ್ನೂ ಕೂಡ ಕಾಮಗಾರಿ ಆರಂಭಿಸದೆ ಗ್ರಾಮದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿದೆ. ದ್ವಿಚಕ್ರ ಹಾಗು ಇತರ ವಾಹನ ಸವಾರರು ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಪರದಾಡುವಂತ ಸನ್ನಿವೇಶ ಸೃಷ್ಟಿಯಾಗಿದೆ.
ಈ ಹಿಂದೆ ರಸ್ತೆ ತಡೆ ನಡೆಸಿದ್ದ ಗ್ರಾಮಸ್ಥರು
ವರ್ಷಗಳ ಹಿಂದೆ ಇದೆ ರೀತಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದ ಸಂದರ್ಭದಲ್ಲಿ ಮನವಿ ನೀಡಿ ಯಾವುದೇ ಪ್ರಯೋಜನ ಕಾಣದಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದ್ದರು. ಈ ವಿಚಾರ ಶಾಸಕರಿಗೆ ತಲುಪಿ ತುರ್ತಾಗಿ ಪ್ಯಾಚ್ ವರ್ಕ್ ಕೈಗೊಳ್ಳುವಂತೆ ಆದೇಶ ನೀಡಿದ್ದರು, ಕೂಡಲೇ ಕಾರ್ಯಾರಂಭವಾಗಿ, ರಸ್ತೆ ಕೊಂಚ ದಿನಗಳ ಮಟ್ಟಿಗೆ ಸುಸ್ಥಿತಿಯಲ್ಲಿತ್ತು.
ಇದನ್ನು ಗಮನಿಸಿದ ಶಾಸಕ ಮಂತರ್ ಗೌಡ ಅವರು ರಸ್ತೆ ಕಾಮಗಾರಿಗೆ ಅನುದಾನವನ್ನೇ ಮೀಸಲಿಟ್ಟು ತಿಂಗಳ ಹಿಂದೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ನಡೆಸಿದ್ದರು. ಆದರೆ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಅವರು ಕೊಟ್ಟರೂ ಇವರು ಕೊಡುವುದಿಲ್ಲ ಎನ್ನುವಂತೆ, ಗುತ್ತಿಗೆದಾರ ದಿನಕ್ಕೊಂದು ಕಾರಣ ನೀಡುತ್ತಾ ಕಾಮಗಾರಿಯನ್ನು ವಿಳಂಬ ಮಾಡುತ್ತಲೇ ಇದ್ದಾರೆ. ಇದು ಹೀಗೆ ಮುಂದುವರಿದರೆ ಗ್ರಾಮಸ್ಥರು ಮತ್ತೊಮ್ಮೆ ಸಿಟ್ಟಿಗೇಳುವುದು ಖಚಿತ.
ರಸ್ತೆಯಲ್ಲಿ ಬಿದ್ದು ಗಾಯಗೊಂಡ ಪ್ರಯಾಣಿಕರು
ಎಲ್ಲಾ ಕಡೆ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗಬೇಕಾದರೆ, ಗಾಳಿಬೀಡು ರಸ್ತೆಯಲ್ಲಿ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಬಂದಿದೆ ಎಂದರೆ ಸುಳ್ಳಲ್ಲ. ಇಂತಹ ರಸ್ತೆಯಲ್ಲಿ ಚಲಿಸುವಾಗ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಯಾವುದೇ ದುರ್ಘಟನೆ ನಡೆಯುವ ಮುನ್ನ ಈ ರಸ್ತೆಯ ಕಾಮಗಾರಿ ಅರಂಭಿಸುವುದು ಸೂಕ್ತ.
ರೆಸಾರ್ಟ್ ಗಳಿಗೆ ಬರುವ ಬೃಹತ್ ಲಾರಿಗಳು
ಈ ರಸ್ತೆಯ ಮತ್ತೊಂದು ದೊಡ್ಡ ಸಂಕಷ್ಟವೆಂದರೆ ಗಾಳಿಬೀಡು ಗ್ರಾಮದಲ್ಲಿ ತಲೆ ಎತ್ತುತ್ತಿರುವ ಬೃಹತ್ ರೆಸಾರ್ಟ್ ಗಳು. ಇಂತಹ ರೆಸಾರ್ಟ್ ಗಳಿಗೆ ಇಪ್ಪತ್ತು, ಮೂವತ್ತು ಟನ್ ಹಾಗು ಇದೇ ರೀತಿಯ ಲಾರಿಗಳಲ್ಲಿ ಬರುವ ಕಚ್ಚಾ ಸಾಮಗ್ರಿ. ಈ ಲಾರಿಗಳ ಭಾರಕ್ಕೆ ರಸ್ತೆ ಹಾಳಾಗುತ್ತಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡುತ್ತಾರೆ. ಇಂತಹ ಬೃಹತ್ ವಾಹನಗಳ ಸಂಚಾರದಿಂದ ರಸ್ತೆಯ ಗುಣಮಟ್ಟ ಕಳಪೆಗೊಳ್ಳುತ್ತಿದೆ, ಇದರಿಂದ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಿಸಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
*ಶೀಘ್ರದಲ್ಲೇ ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಿಂದ ಶಾಸಕರಿಗೆ ದೂರು*
ಈಗಾಗಲೇ ಶಾಸಕರು ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದರೂ, ಸಕಾಲದಲ್ಲಿ ಕೆಲಸ ಆರಂಭಿಸದ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ.
ಸಾರ್ವಜನಿಕ ಸೇವೆಯ ಭಾಗವಾದ ರಸ್ತೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ತೋರುವಂತಹ ಇಂತಹ ಗುತ್ತಿಗೆದಾರರ ಬಗ್ಗೆ ಆಕ್ರೋಶಗೊಂಡಿರುವ ಗ್ರಾಮಸ್ಥರು, ಡಿಸೆಂಬರ್ ಕೊನೆಯ ದಿನದೊಳಗೆ ಕೆಲಸ ಆರಂಭಿಸದಿದ್ದರೆ ಗುತ್ತಿಗೆದಾರನ ವಿರುದ್ಧ ಶಾಸಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
🖋️ಚಂದನ್ ನಂದರಬೆಟ್ಟು

