
ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಯನೆಗೆ ವರ್ತಕರ ಸಾಥ್
ಮರಗೋಡು: ಸಂಚಾರ ಯೋಗ್ಯತೆ ಕಳೆದುಕೊಂಡ ಕಟ್ಟೆಮಾಡು–ಮರಗೋಡು ರಸ್ತೆಯ ದುಸ್ಥಿತಿಯನ್ನು ಖಂಡಿಸಿ ಮರಗೋಡು ಗ್ರಾಮದಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪ್ರತಿಭಟನೆಯ ಅಂಗವಾಗಿ ಗ್ರಾಮದಲ್ಲಿನ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗ್ರಾಮಸ್ಥರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.
ಕಳೆದ 20 ವರ್ಷಗಳಿಂದ ಡಾಂಬರೀಕರಣವಾಗದಿರುವ ಈ ಪ್ರಮುಖ ರಸ್ತೆಯಿಂದ ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ಮರಗೋಡು ಗ್ರಾಮ ಕೇಂದ್ರದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ಪ್ರಯಾಣಿಕರು ತೊಂದರೆಗೆ ಒಳಗಾದರು. ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ಬೈಕ್ ಸವಾರರು ಉರುಳಿ ಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಪ್ರಾಣಪಣಕ್ಕೆ ಸರ್ಕಸ್ ಮಾಡುವಂತಾಗಿದೆ.
ಸ್ಥಳಕ್ಕೆ ಮಡಿಕೇರಿ ಡಿವೈಎಸ್‌ಪಿ ಸೂರಜ್ ಭೇಟಿ ನೀಡಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ರಸ್ತೆ ತಡೆ ಮಾಡದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದರು. ಜೊತೆಗೆ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೀಘ್ರದಲ್ಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸುವ ಭರವಸೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

