ಟಿಂಬರ್ ಲೋಡ್ ಸಮೇತ ಮಗುಚಿ ಬಿದ್ದ ಲಾರಿ : ನಿರ್ಬಂಧವಿದ್ದರೂ ಮರದ ದಿಮ್ಮಿಗಳ ಸಾಗಾಟಕ್ಕೆ ಅಡ್ಡಿಯಿಲ್ಲ, ಜಿಲ್ಲಾಡಳಿತದ ಆದೇಶಕ್ಕೂ ಕಿಮ್ಮತ್ತಿಲ್ಲ…!!?
ಮಡಿಕೇರಿ : ಬೃಹತ್ ಲಾರಿಯೊಂದು ಟಿಂಬರ್ ಲೋಡ್ ಸಮೇತ ಮಗುಚಿ ಬಿದ್ದಿರುವ ಘಟನೆ ಸಿದ್ದಾಪುರ – ವಿರಾಜಪೇಟೆ ಮಾರ್ಗದಲ್ಲಿ ನಡೆದೆ.
ನೆನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ನಡೆದ ಘಟನೆ. ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಸಂದರ್ಭ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದ ಸಮೀಪದ ತಿರುವಿನಲ್ಲಿ ಈ ಅನಾಹುತ ಸಂಭವಿಸಿದ್ದು, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಿಂಬರ್ ಲೋಡ್ ಸಾಗಿಸುತ್ತಿರುವ ಸಂದರ್ಭ ರಸ್ತೆ ದುರಸ್ತಿಗಾಗಿ ಅಗೆಯಲಾಗಿರುವ ಗುಂಡಿಗೆ ಸಿಲುಕಿ (KA 51 AJ 2601) ಸಂಖ್ಯೆಯ ಲಾರಿ ಮಗುಚಿ ಬಿದ್ದಿದೆ.
ಶಾಲಾ ಬಸ್ ಸೇರಿದಂತೆ ನೂರಾರು ವಾಹನಗಳು ದಿನ ನಿತ್ಯ ಸಾಗುವ ಈ ರಸ್ತೆಯಲ್ಲಿ ಇತ್ತೀಚೆಗಷ್ಟೇ ಲಾರಿಯೊಂದು ಮಗುಚಿ ಬೀಳುವ ಹಂತಕ್ಕೆ ತಲುಪಿದ್ದ ಘಟನೆ ನಡೆದು ಬಳಿಕ ಗುಂಡಿಗಳಿಗೆ ಒಂದಿಷ್ಟು ಜಲ್ಲಿ ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚಲಾಗಿತ್ತು. ಆದರೆ ಇದೀಗ ಅದೇ ಸ್ಥಳದಲ್ಲಿ ಮತ್ತೆ ಘಟನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯಿಂದ ಕೆಲಕಾಲ ಸಿದ್ದಾಪುರ – ವಿರಾಜಪೇಟೆ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಶಾಲಾ ವಾಹನಗಳ ಓಡಾಟಕ್ಕೂ ಅಡ್ಡಿಯಾಗಿತ್ತು. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಟ್ರಾಪಿಕ್ ಸಮಸ್ಯೆಯನ್ನು ಬಗೆಹರಿಸಿದರು.
ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಭಾರೀ ವಾಹನಗಳ ಓಡಾಟ ಹಾಗೂ ಮರದ ದಿಮ್ಮಿಗಳ ಸಾಗಾಟಕ್ಕೆ 06-07-2 025 ರಿಂದ 5-08-2025 ರವರೆಗೆ ನಿರ್ಬಂಧ ವಿಧಿಸಿ ಎಂಎಜಿ/ಆರ್.ಟಿ.ಎ/01/2025-26 ಅಧಿಸೂಚನೆಯಡಿ ಜೂಲೈ 5 ರಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ಆದರೂ ಜಿಲ್ಲೆಯಲ್ಲಿ ಮರದ ದಿಮ್ಮಿಗಳ ಸಾಗಾಟ ನಿರ್ಭೀತಿಯಿಂದ ಸಲಿಸಿಲ್ಲದೇ ನಡೆಯುತ್ತಲೇ ಇದೆ ಎಂಬುವುದಕ್ಕೆ ಈ ಘಟನೆ ಪುಷ್ಠಿ ನೀಡುವಂತಿದೆ. ಮರದ ದಿಮ್ಮಿಗಳ ಸಾಗಾಟ ಸಂದರ್ಭ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲದಂತಾಗಿದೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲಾಡಳಿತದ ಆದೇಶವಿದ್ದರೂ ನಿರ್ಭೀತಿಯಿಂದ ಮರದ ದಿಮ್ಮಿಗಳನ್ನು ಭಾರೀ ವಾಹನಗಳಲ್ಲಿ ಸಾಗಿಸುತ್ತಿರುವುದು ಅಧಿಕಾರಿಗಳಿಗೆ ಲಂಚ ನೀಡಿ ನಡೆಯುತ್ತಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿದೆ. ಈ ಕುರಿತು ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.


