ಮಡಿಕೇರಿ : ಬಲಿಜ ಸಮಾಜದ ಏಳಿಗೆಗಾಗಿ ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಂಘ ಅಸ್ಥಿತ್ವಕ್ಕೆ ತರಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜ ಸುಮಾರು ೩೦-೩೫ ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪ್ರಸ್ತುತ ಸಂಘದಲ್ಲಿ ೪೦ ಮಂದಿ ಸದಸ್ಯತ್ವ ಪಡೆದುಕೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ೧೦೦೦ ಸದಸ್ಯತ್ವ ನೋಂದಾಣಿ ಮಾಡುವ ಗುರಿಯಿದೆ. ಸಮಾಜಬಾಂಧವರು ದೂ.ಸಂ: 9591756257 ಸಂಖ್ಯೆಯನ್ನು ಸಂಪರ್ಕಿಸಿ ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸದಸ್ಯರ ಶಿಕ್ಷಣ ಅಭಿವೃದ್ಧಿ ಮಾಡುವುದು. ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವುದು. ಜನಾಂಗಬಾಂಧವರ ಪ್ರತಿಭೆ ವ್ಯಕ್ತಪಡಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಸೇರಿದಂತೆ ಇನ್ನಿತರೆ ಉದ್ದೇಶದಿಂದ ಸಂಘವನ್ನು ಅಸ್ಥಿತಕ್ಕೆ ತರಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಲ್ಪಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು. ಮಹಿಳಾ ಸಂಘಟನೆ ರಚನೆ ಮಾಡುವುದು ಮತ್ತು ಮಧು ವರರ ಸಮಾವೇಶ ಏರ್ಪಡಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜಕ್ಕೆ ಸಮುದಾಯ ಭವನವಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರ್ಕಾರ ಶಿಕ್ಷಣಕ್ಕೆ ಶೇ.೫ರಷ್ಟು ಮೀಸಲಾತಿ ನೀಡಿದೆ. ಅದೇ ರೀತಿ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುಬ್ರಮಣಿ, ಖಜಾಂಚಿ ಟಿ.ಎ.ಪ್ರಕಾಶ್, ಸದಸ್ಯರಾದ ಟಿ.ಆರ್.ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.


