ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆಟೋ ಚಾಲಕನ ಬಂಧನ
ಪರಿಚಯವಿದ್ದ ಆಟೋ ಚಾಲಕನಿಂದಲೇ ಕೃತ್ಯವೆಸಗಿರುವ ಆರೋಪ
ಮಡಿಕೇರಿ. ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಡಿಕೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೇಳಿಬಂದಿದೆ. ಘಟನೆ ಜಿಲ್ಲೆಯಾದ್ಯಂತ ಆತಂಕ ಮೂಡಿಸಿದೆ.
ಮಣಿಕಂಠ ಎಂಬ ಆಟೋ ಚಾಲಕ ಬಾಲಕಿಗೆ ಪರಿಚಯವಿದ್ದ ವ್ಯಕ್ತಿಯಾಗಿದ್ದು, ಡ್ರಾಪ್ ನೀಡುವ ನೆಪದಲ್ಲಿ ಬಾಲಕಿಯನ್ನು ಆಟೋದಲ್ಲಿ ಕೂರಿಸಿಕೊಂಡು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಆಟೋದ ಮುಂಭಾಗದ ಸೀಟಿನಲ್ಲಿ ಬಾಲಕಿಯನ್ನು ಕುಳ್ಳಿರಿಸಿಕೊಂಡು ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಘಟನೆಯ ಬಳಿಕ ಮನೆಗೆ ಮರಳಿದ ಬಾಲಕಿ ನೋವಿನಿಂದ ನರಳಾಡುತ್ತಿದ್ದುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯಕೀಯ ಪರೀಕ್ಷೆಯ ವೇಳೆ ದೌರ್ಜನ್ಯದ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
*ಮಕ್ಕಳ ಮೇಲಿನ ಇಂತಹ ಕೃತ್ಯಗಳು ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

