
ವಿರಾಜಪೇಟೆ: ಕೊಡಗಿನ ಬುಡಕಟ್ಟು ಸಮುದಾಯಗಳಲ್ಲಿರುವ ಕಲಾವಿದರ ಸಂಗೀತ, ಸಂಸ್ಕೃತಿ ಹಾಗೂ ಕಲಾ ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಅವರ ಪ್ರತಿಭೆಯನ್ನು ಗುರುತಿಸಿ ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲು ವೇದಿಕೆ ಕಲ್ಪಿಸಬೇಕು ಎಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಮನವಿ ಮಾಡಿದರು.
ವಿರಾಜಪೇಟೆಯ ಶ್ರೀ ಬಸವೇಶ್ವರ ಗೌರಿ ಗಣೇಶ ದೇವಾಲಯದ ಸಭಾಂಗಣದಲ್ಲಿ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ವಾಯ್ಸ್ ಆಫ್ ವಿರಾಜಪೇಟೆ–2026’ ಸಂಗೀತ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುಡಕಟ್ಟು ಸಮುದಾಯಗಳ ಹಾಡುಗಳಲ್ಲಿ ಅವರ ಜೀವನದ ನೋವು, ನಲಿವು ಹಾಗೂ ಉತ್ತಮ ಸಂದೇಶಗಳು ಅಡಗಿವೆ. ಇಂತಹ ವಿಶಿಷ್ಟ ಪ್ರತಿಭೆಗಳನ್ನು ಸರ್ಕಾರಗಳು ಗುರುತಿಸಿ, ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ಸಂಗೀತಕ್ಕೆ ಭಾಷೆ, ಜಾತಿ ಮತ್ತು ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ. ಸಂಗೀತ ಹೃದಯದಿಂದ ಹುಟ್ಟಿ ಹೃದಯವನ್ನೇ ತಲುಪುವ ಅದ್ಭುತ ಮಾಧ್ಯಮ. ಉತ್ತಮ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿಯೂ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪ್ರಕೃತಿಯ ಪ್ರತಿಯೊಂದು ಚಲನೆಯಲ್ಲೂ ಸಂಗೀತ ಅಡಗಿದೆ. ಮಳೆಯ ಸದ್ದು, ಪಕ್ಷಿಗಳ ಕಲರವ ಹಾಗೂ ಗಾಳಿಯ ನಾದದಲ್ಲೂ ಸಂಗೀತವನ್ನು ಕಾಣಬಹುದು. ಅದೇ ರೀತಿ ಸಂಗೀತ ಮನುಷ್ಯನ ಬದುಕಿನ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಯಾಗಿದೆ ಎಂದು ಸಂಕೇತ್ ಪೂವಯ್ಯ ಹೇಳಿದರು.
ಗ್ರಾಮೀಣ ಭಾಗದಲ್ಲಿರುವ ಪ್ರತಿಭಾವಂತ ಕಲಾವಿದರಿಗೆ ತಮ್ಮ ಪ್ರತಿಭೆಗಳನ್ನು ವೇದಿಕೆಯಲ್ಲಿ ಅನಾವರಣಗೊಳಿಸಲು **‘ವಾಯ್ಸ್ ಆಫ್ ವಿರಾಜಪೇಟೆ’**ಯಂತಹ ಕಾರ್ಯಕ್ರಮಗಳು ಉತ್ತಮ ಅವಕಾಶ ಕಲ್ಪಿಸುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭೆ ಸದಸ್ಯ ಎಸ್.ಎಚ್. ಮತಿನ್ ಮಾತನಾಡಿ, ವಿರಾಜಪೇಟೆಯಲ್ಲಿ ಎಲ್ಲ ಜನಾಂಗದವರು ಒಗ್ಗೂಡಿ ಗೌರಿ ಗಣೇಶೋತ್ಸವ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಶ್ರೀ ಬಸವೇಶ್ವರ ದೇವಾಲಯದ ಗೌರಿ ಗಣೇಶ ಉತ್ಸವ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು.
ಶ್ರೀ ಬಸವೇಶ್ವರ ದೇವಾಲಯದ ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಕಾಮತ್, ಜೆ.ಎಂ. ಪುಷ್ಪರಾಜ್ ಜೈನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮೈಸೂರಿನ ಗಾಯಕ ರಾಜೇಶ್ ಪಡಿಯರ್ ಪ್ರಾರ್ಥಿಸಿದರು. ರವೀಂದ್ರನಾಥ ಕಾಮತ್ ಸ್ವಾಗತಿಸಿದರು. ಪುಷ್ಪರಾಜ್ ಜೈನ್ ವಂದಿಸಿದರು.

