ಮಡಿಕೇರಿ: ಕೊಡಗಿನ ಖ್ಯಾತ ಕರಾಟೆ ಪಟು ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಹಂಷಿ ಸಿ.ಎಸ್. ಅರುಣ್ ಮಚಯ್ಯ ಅವರು ಅಂತರರಾಷ್ಟ್ರೀಯ ಕರಾಟೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.
ಜಪಾನ್ನ ಯೊಕೊಹಾಮಾದಲ್ಲಿ ನಡೆದ ವಿಶ್ವ ಶಿತೋರ್ಯು ಕರಾಟೆ-ಡೋ ಫೆಡರೇಶನ್ (WSKF) ಚುನಾವಣೆಯಲ್ಲಿ ಅರುಣ್ ಮಚಯ್ಯ ಅವರು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಮರುಚುನಾಯಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರವು ಅರುಣ್ ಮಚಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಅರುಣ್ ಮಚಯ್ಯ ಅವರು WSKFನ ಸ್ಥಾಯೀ ನಿರ್ದೇಶಕರಾಗಿ ಹಾಗೂ ಆಲ್ ಇಂಡಿಯಾ ಶಿತೋರ್ಯು ಕರಾಟೆ ಯೂನಿಯನ್ (AISKU)ನ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಅವರು, ಕ್ರೀಡಾ ಕ್ಷೇತ್ರದ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಅರುಣ್ ಮಚಯ್ಯ ಅವರು, ಭಾರತದ ಮೊದಲ ರಾಷ್ಟ್ರೀಯ ಕರಾಟೆ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪ್ರಮುಖ ಜವಾಬ್ದಾರಿ ಪಡೆದಿರುವ ಅರುಣ್ ಮಚಯ್ಯ ಅವರ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.



