ಮಡಿಕೇರಿ–ಕುಶಾಲನಗರವನ್ನೂ ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಿ: ಎಡಿಕೇರಿ ಪ್ರಸನ್ನ ಗೌಡ. 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಕುಶಾಲನಗರ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಸಮಾಜ ಸೇವಕ ಹಾಗೂ ಬಿಜೆಪಿ ಪ್ರಮುಖ ಪ್ರಸನ್ನ ಎಡಿಕೇರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಸುಮಾರು ಶೇ.35ರಷ್ಟು ಮಳೆ ಕೊರತೆಯಾಗಿದ್ದು, ಕಾವೇರಿ ನದಿಯ ಮೂಲದಲ್ಲೇ ನೀರಿನ ಹರಿವು ಕುಸಿದಿದೆ. ಮಡಿಕೇರಿ ತಾಲೂಕಿನ ಭಾಗಮಂಡಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭತ್ತದ ಕೃಷಿಗೆ ತೊಂದರೆಯಾಗಿದ್ದು, ಕಾಫಿ ಹಾಗೂ ಕಾಳುಮೆಣಸು ಬೆಳೆಗಾರರೂ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಹಲವು ಹಂತಗಳಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದ್ದು, ಕೊಡಗಿನ ಸೋಮವಾರಪೇಟೆ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಆದರೆ ಮಡಿಕೇರಿ ಹಾಗೂ ಕುಶಾಲನಗರ ತಾಲೂಕುಗಳನ್ನು ಪರಿಗಣಿಸದಿರುವುದು ವಿಷಾದನೀಯ ಎಂದು ಪ್ರಸನ್ನ ಎಡಿಕೇರಿ ಹೇಳಿದ್ದಾರೆ.

ಕುಶಾಲನಗರ ತಾಲೂಕಿನಲ್ಲಿಯೂ ಮಳೆ ಕೊರತೆಯಿಂದ ಕಾಫಿ, ಕಾಳುಮೆಣಸು, ಭತ್ತ, ಶುಂಠಿ ಹಾಗೂ ಮುಸುಕಿನ ಜೋಳ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿನ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಮಡಿಕೇರಿ ಹಾಗೂ ಕುಶಾಲನಗರವನ್ನೂ ಬರಪೀಡಿತ ತಾಲೂಕುಗಳಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಶಾಸಕರು ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ಎರಡೂ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ:
ಮಳೆ ಕೊರತೆಯಿಂದ ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರಸನ್ನ ಎಡಿಕೇರಿ ಎಚ್ಚರಿಸಿದ್ದಾರೆ.

Exit mobile version