ಮಡಿಕೇರಿ: ಕೊಡಗು ಕಾಂಗ್ರೆಸ್ ರಾಜಕೀಯದಲ್ಲಿ ಈಗ ಜಿಲ್ಲಾಧ್ಯಕ್ಷ ಸ್ಥಾನದ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವು ನಾಯಕರು ಒಲವು ತೋರಿದ್ದು ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ನಾಪಂಡ ಮುತ್ತಪ್ಪ ಮುಂಚೂಣಿಯಲ್ಲಿದ್ದಾರೆ.
ಕೊಡಗಿನಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ರಾಜಕಾರಣವನ್ನು ಆರಂಭಿಕ ಹಂತದಲ್ಲೇ ವಿರೋಧಿಸುತ್ತಾ, ತಮ್ಮದೇ ಸಿದ್ಧಾಂತದೊಂದಿಗೆ ರಾಜಕೀಯ ಹೋರಾಟ ನಡೆಸಿದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರು ಇದೀಗ ಮತ್ತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಹೊಂದಾಣಿಕೆಯ ರಾಜಕಾರಣಕ್ಕೆ ಒಗ್ಗಿಕೊಳ್ಳದೆ, ತಾವು ನಂಬಿರುವ ಎಡಪಂಥೀಯ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದಿರುವುದೇ ನಾಪಂಡ ಸಹೋದರರ ರಾಜಕೀಯ ಪಯಣದ ಪ್ರಮುಖ ಅಂಶವಾಗಿದೆ. ಈ ಕಾರಣಕ್ಕಾಗಿಯೇ ಪಕ್ಷದೊಳಗೆಯೂ ಹಲವು ಸಂದರ್ಭಗಳಲ್ಲಿ ಮೂಲೆಗುಂಪಾಗಬೇಕಾಯಿತು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಹೋರಾಟಗಳ ಮೂಲಕವೇ ರಾಜಕೀಯಕ್ಕೆ ಎಂಟ್ರಿ
ಟ್ರೇಡ್ ಯೂನಿಯನ್ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶಿಸಿದ ಮುತ್ತಪ್ಪ ಮತ್ತು ಮುದ್ದಪ್ಪ, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುತ್ತಾ ತಮ್ಮದೇ ಆದ ರಾಜಕೀಯ ನೆಲೆಯನ್ನು ನಿರ್ಮಿಸಿಕೊಂಡವರು.
ಟ್ರೇಡ್ ಯೂನಿಯನ್ ಮತ್ತು ಸಾಮಾಜಿಕ ಚಟುವಟಿಕೆಗಳೊಂದಿಗೆ ಅವರ ಸಂಪರ್ಕ ಬಹಳ ಹಿಂದಿನಿಂದಲೂ ಇದೆ. ಅವರು INTUC ಕರ್ನಾಟಕದೊಂದಿಗೆ ಕೆಲಸ ಮಾಡಿದ್ದು, ಗಾರ್ಮೆಂಟ್ ವರ್ಕರ್ಸ್ ಯೂನಿಯನ್, ಪ್ರಾಪರ್ಟಿ ಸರ್ವಿಸಸ್ ಎಂಪ್ಲಾಯೀಸ್ ಯೂನಿಯನ್ ಸೇರಿದಂತೆ ಕಾರ್ಮಿಕ ಸಂಘಟನೆಗಳಲ್ಲಿ ಪಾತ್ರ ವಹಿಸಿದ್ದಾರೆ. ಅವರ ಸಹೋದರ ನಾಪಂಡ ಮುದ್ದಪ್ಪ ಕೂಡ ಕಾರ್ಮಿಕ ಸಂಘಟನೆಗಳು ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಬ್ಬರು ಸಹೋದರರಲ್ಲಿ ನಾಪಂಡ ಮುತ್ತಪ್ಪ ರಾಜಕೀಯವಾಗಿ ಹೆಚ್ಚು ಸಕ್ರಿಯರಾಗಿದ್ದು, ತಮ್ಮದೇ ಆದ ಸಂಘಟನೆಯ ಮೂಲಕ ಕೊಡಗಿನಲ್ಲಿ ಗುರುತಿಸಿಕೊಂಡಿದ್ದಾರೆ.
2015ರಲ್ಲೇ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ.
2015ರಲ್ಲಿಯೇ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮುತ್ತಪ್ಪ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಅವರಿಗೆ ಅವಕಾಶ ಸಿಗಲಿಲ್ಲ. ನಂತರವೂ ಪಕ್ಷದೊಳಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಭರವಸೆ ದೊರೆತಿತ್ತು ಎನ್ನಲಾಗುತ್ತಿದ್ದು, ಇದೀಗ ಮತ್ತೊಮ್ಮೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಮುತ್ತಪ್ಪ ಅವರ ಹೆಸರು ಕೇಳಿಬರುತ್ತಿದೆ.
ಪಕ್ಷದೊಳಗಿನ ಹೊಂದಾಣಿಕೆಯ ರಾಜಕಾರಣಕ್ಕೆ ಬದಲಾಗಿ ಸಿದ್ಧಾಂತ ಆಧಾರಿತ ರಾಜಕಾರಣಕ್ಕೆ ಒತ್ತು ನೀಡುವ ಮುತ್ತಪ್ಪ ಅವರಿಗೆ ಈ ಬಾರಿ ಪಕ್ಷದ ವರಿಷ್ಠರು ಅವಕಾಶ ನೀಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಸ್ವಪಕ್ಷದ ನಾಯಕರ ವಿರುದ್ಧವೂ ಧ್ವನಿ
ಕಾಂಗ್ರೆಸ್ ಪಕ್ಷದ ನಾಯಕರು ತಪ್ಪು ಮಾಡಿದ ಸಂದರ್ಭಗಳಲ್ಲೂ ಮುತ್ತಪ್ಪ ಹಾಗೂ ಮುದ್ದಪ್ಪ ಮೌನ ವಹಿಸದೆ ಸ್ವಪಕ್ಷದ ನಾಯಕರ ವಿರುದ್ಧವೇ ಧ್ವನಿ ಎತ್ತಿದರುವ ಸಂದರ್ಭಗಳು ಬಹಳಷ್ಟಿದೆ
ಅದೇ ರೀತಿ ಬಿಜೆಪಿ ಹಾಗೂ ಆರ್ಎಸ್ಎಸ್ನ ಬಲಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುವವರ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟೀಕೆ ಮಾಡುತ್ತಾ ಬಂದಿದ್ದಾರೆ.
ಸಾಮಾಜಿಕ ಜಾಲತಾಣಗಳ ಆರಂಭಿಕ ದಿನಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹಾಗೂ ನೀತಿಗಳನ್ನು ಪ್ರಶ್ನಿಸುವ ಮೂಲಕ ಕೊಡಗಿನಲ್ಲಿ ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿಯೂ ಗಮನ ಸೆಳೆದವರಲ್ಲಿ ನಾಪಂಡ ಸಹೋದರರು ಪ್ರಮುಖರು ಎಂಬ ಅಭಿಪ್ರಾಯ ಅವರ ಬೆಂಬಲಿಗರದ್ದು.
ಟೀಕೆಗಳ ನಡುವೆಯೂ ಸಿದ್ಧಾಂತಕ್ಕೆ ಬದ್ಧತೆ
ನಾಪಂಡ ಸಹೋದರರ ರಾಜಕೀಯ ನಿಲುವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ಸಂದರ್ಭಗಳೂ ಇವೆ. ಬಿಜೆಪಿ ಮತ್ತು ಆರ್ಎಸ್ಎಸ್ ಪರವಾದ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಕಟು ಟೀಕೆ, ವೈಯಕ್ತಿಕ ದಾಳಿಗಳು ಹಾಗೂ ಅಸಭ್ಯ ಪದಬಳಕೆಯ ನಡುವೆಯೂ ತಮ್ಮ ರಾಜಕೀಯ ನಿಲುವನ್ನು ಬದಲಿಸಿಲ್ಲ ಎಂಬುದು ಅವರ ಬೆಂಬಲಿಗರ ವಾದ.
ಹೊಂದಾಣಿಕೆಯ ರಾಜಕಾರಣಕ್ಕೆ ಮಣಿಯದೆ ಸಿದ್ಧಾಂತದ ಪರವಾಗಿ ನಿಲ್ಲುವುದರಿಂದಲೇ ಪಕ್ಷದೊಳಗೆ ಸೂಕ್ತ ಸ್ಥಾನಮಾನ ದೊರೆಯಲಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಪಕ್ಷ ತೊರೆದು ಮತ್ತೆ ಕಾಂಗ್ರೆಸ್ನತ್ತ.
ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಮುತ್ತಪ್ಪ ಕಾಂಗ್ರೆಸ್ ತೊರೆದಿದ್ದರು. ನಂತರದ ಬೆಳವಣಿಗೆಯಲ್ಲಿ ಈಗಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲೇ ಮತ್ತೆ ಸ್ವಪಕ್ಷ ಸೇರಿದ್ದರು.
ಇದೀಗ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸ ನೇಮಕಾತಿ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ನಾಪಂಡ ಮುತ್ತಪ್ಪ ಅವರ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ.
ಸಿದ್ಧಾಂತದ ರಾಜಕಾರಣವೋ, ಹೊಂದಾಣಿಕೆಯ ರಾಜಕಾರಣವೋ?
ಕೊಡಗು ಕಾಂಗ್ರೆಸ್ನಲ್ಲಿ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಪಕ್ಷದ ವರಿಷ್ಠರು ಈ ಬಾರಿ ಯಾವ ರೀತಿಯ ನಾಯಕತ್ವಕ್ಕೆ ಆದ್ಯತೆ ನೀಡುತ್ತಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.



