Screenshot
Screenshot
Screenshot
Screenshot
Screenshot
Screenshot
Screenshot

ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಅವಳಿ ಮಕ್ಕಳ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ?: ಜಿಲ್ಲಾ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ದೂರು

 

ಮಡಿಕೇರಿ: ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಮಯೋಚಿತ ಚಿಕಿತ್ಸೆ ನೀಡುವಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಗಂಭೀರ ನಿರ್ಲಕ್ಷ್ಯ ವಹಿಸಿದ ಪರಿಣಾಮ ಮಹಿಳೆ ಮತ್ತು ಆಕೆಯ ಗರ್ಭದಲ್ಲಿದ್ದ ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಸಂಬಂಧಪಟ್ಟ ವೈದ್ಯರು, ಆಸ್ಪತ್ರೆಯ ಆಡಳಿತ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತಿಯೊಬ್ಬರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ದೂರುದಾರ ಹರೀಶ್ ಹೆಚ್.ಸಿ. ಅವರ ದೂರಿನ ಪ್ರಕಾರ, ಅವರ ಪತ್ನಿ ಸೀಮಾದೇವಿ ಹೆಚ್.ಎಸ್. ಅವಳಿ ಮಕ್ಕಳಿಗೆ ಗರ್ಭಿಣಿಯಾಗಿದ್ದು, ಆರಂಭದಿಂದಲೇ ನಿಯಮಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಗೆ ಒಳಗಾಗುತ್ತಿದ್ದರು. ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜುಲೈ 8ರಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಬಳಿಕ, ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರೂ ಹಲವು ಗಂಟೆಗಳ ಕಾಲ ಸಮರ್ಪಕ ತುರ್ತು ಚಿಕಿತ್ಸೆ ನೀಡದೆ ವಿಳಂಬ ಮಾಡಲಾಗಿದೆ. ನಂತರ ಐಸಿಯುವಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮರುದಿನ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.

ಜೆಎಸ್‌ಎಸ್ ಆಸ್ಪತ್ರೆಗೆ ತಲುಪಿದ ಬಳಿಕ ಗರ್ಭದಲ್ಲಿದ್ದ ಅವಳಿ ಮಕ್ಕಳು ಮೃತಪಟ್ಟಿರುವುದು ದೃಢಪಟ್ಟಿದ್ದು, ಬಳಿಕ ಚಿಕಿತ್ಸೆ ವೇಳೆ ಮಹಿಳೆಯೂ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗರ್ಭಿಣಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಹಿರಿಯ ತಜ್ಞರ ಮೇಲ್ವಿಚಾರಣೆ, ತುರ್ತು ಚಿಕಿತ್ಸಾ ಕ್ರಮ, ಅಗತ್ಯ ವೈದ್ಯಕೀಯ ನಿರ್ಧಾರ ಹಾಗೂ ನಿರಂತರ ಮೇಲ್ವಿಚಾರಣೆಯಲ್ಲಿ ಲೋಪವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ನಿರ್ಲಕ್ಷ್ಯದಿಂದ ಮೂರು ಅಮೂಲ್ಯ ಜೀವಗಳು ಕಳೆದುಹೋಗಿವೆ ಎಂದು ದೂರುದಾರರು ಹೇಳಿದ್ದಾರೆ.

ಪ್ರಕರಣದ ಕುರಿತು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ವೈಜ್ಞಾನಿಕ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಶೀಟ್, ಓಪಿಡಿ ದಾಖಲೆಗಳು, ಸ್ಕ್ಯಾನ್ ವರದಿಗಳು, ಸಿಟಿಜಿ ದಾಖಲೆಗಳು, ನರ್ಸಿಂಗ್ ನೋಟ್ಸ್, ಸಿಸಿಟಿವಿ ದೃಶ್ಯಾವಳಿ, ಡ್ಯೂಟಿ ರೋಸ್ಟರ್ ಸೇರಿದಂತೆ ಎಲ್ಲಾ ಮೂಲ ದಾಖಲೆಗಳನ್ನು ವಶಪಡಿಸಿಕೊಂಡು ವೈದ್ಯಕೀಯ ತಜ್ಞರ ಸಮಿತಿಯಿಂದ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, ಚಿಕಿತ್ಸೆ ನೀಡಿದ ವೈದ್ಯರು, ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

ಈ ಕುರಿತು ಮಡಿಕೇರಿ ಜಿಲ್ಲಾ ಆಸ್ಪತ್ರೆ ಅಥವಾ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Exit mobile version