ಕೊಡಗಿನಲ್ಲಿ ಶಾಂತಿ ಕದಡುವ ಸಂಚು? ತನಿಖೆಗೆ ಆಗ್ರಹಿಸಿದ ಬಿಜೆಪಿ ವಕ್ತಾರ ರವಿ ಕುಶಾಲಪ್ಪ
ಮಡಿಕೇರಿ: ಕೊಡಗಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್‌ಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ರವಿ ಕುಶಾಲಪ್ಪ ಅವರು ಅವರ ಮುಖಪುಟದ ಮೂಲಕ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “Voice of Youth Kodagu” ಎಂಬ ವಾಟ್ಸ್ಆ್ಯಪ್ ಗುಂಪಿನಲ್ಲಿ ಹೋರಾಟದ ಹೆಸರಿನಲ್ಲಿ ಆತಂಕಕಾರಿ ಸಂದೇಶಗಳು ವಿನಿಮಯವಾಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. “ಟೂಲ್ಸ್ ತರೋದ”, “ಜೀವ ತೆಗೆಯಕ್ಕು ಗೊತ್ತು” ಎಂಬಂತಹ ಸಂದೇಶಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಿದ್ದು, ಇವುಗಳ ಹಿನ್ನೆಲೆ ಹಾಗೂ ಉದ್ದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ತಿಂಗಳ 25ರಂದು ನಡೆಯಲಿರುವ ಪ್ರತಿಭಟನೆಗೆ ಅನುಮತಿ ನೀಡುವ ಮುನ್ನ ಪೊಲೀಸ್ ಇಲಾಖೆ ಈ ವಿಚಾರವನ್ನು ಸಮಗ್ರವಾಗಿ ತನಿಖೆ ನಡೆಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕೊಡಗಿನ ಶಾಂತಿ, ಸೌಹಾರ್ದತೆ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಪ್ರಯತ್ನವನ್ನು ಆರಂಭದಲ್ಲೇ ತಡೆಯಬೇಕು ಎಂದು ರವಿ ಕುಶಾಲಪ್ಪ ಒತ್ತಾಯಿಸಿದ್ದಾರೆ.


