ಮಡಿಕೇರಿ : ವಸತಿ ಶಾಲೆಗಳ ಖಾಯಂ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘ, ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿ.ಅಲೋಕ್, ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳ ಶ್ರಮದಿಂದ ಪ್ರತಿ ಭಾರಿ ಉತ್ತಮ ಫಲಿತಾಂಶ ಬರುತ್ತಿದೆ. ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆಯ ಶಾಲೆಗಳ ಸಿಬ್ಬಂದಿಗಳಿಗೆ ದೊರೆಯುವ ಹಲವು ಸೌಲಭ್ಯಗಳು ಕ್ರೈಸ್ ಖಾಯಂ ನೌಕರರಿಗೆ ಸಿಗುತ್ತಿಲ್ಲ. ಆದರೂ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ. ಆದರೆ, ನಮಗೆ ಹಿಡಿಗಂಟು, ಜ್ಯೋತಿ ಸಂಜೀವಿನಿ ಸೇರಿದಂತೆ ಇತರೆ ವ್ಯವಸ್ಥೆಯಿಲ್ಲ. ಇವುಗಳನೆಲ್ಲ ನಮಗೂ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆಯೆಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಂಬರ, ಖಜಾಂಚಿ ಎಂ.ಆರ್.ಮೀನಾ, ಸಹಕಾರ್ಯದರ್ಶಿ ಎಚ್.ಆರ್.ಷಡಕ್ಷರಿ, ತಾಲೂಕು ಕಾರ್ಯದರ್ಶಿಗಳಾದ ಕೆ.ಸಂತೋಷ್ ಕುಮಾರ್, ಕೆ.ವಿ.ಅಮೃತ್, ತಾಂತ್ರಿಕ ಕಾರ್ಯದರ್ಶಿ ಪಿ.ಕೆ.ಆಶಿಫ್, ದಿಲನ್ ಮತ್ತಿತರರು ಈ ಸಂದರ್ಭ ಇದ್ದರು.

Exit mobile version