ಮಡಿಕೇರಿ : ಕೊಡಗಿನಲ್ಲಿ ಅರಣ್ಯ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ತಾಂಡವವಡುತ್ತಿದ್ದು, ತನಿಖಾ ಸಮಿತಿ ರಚನೆ ಮಾಡುವಂತೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವು ಅರಣಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಪರಿಣಾಮ ಅರಣ್ಯ ಇಲಾಖೆಯಲ್ಲಿ ಮಹತ್ವದ ಯೋಜನೆಗಳು ನೆಲಕಚ್ಚುತ್ತಿದೆ. ಅಲ್ಲದೇ ಕೆಲವು ಯೋಜನೆಗಳು ಪ್ರಗತಿ ಸಾಧ್ಯವಾಗುತ್ತಿಲ್ಲ. ಜತೆಗೆ ೨೦-೨೫ ವರ್ಷಗಳಿಂದ ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೇ ಹಾಗೆ ಉಳಿದುಕೊಂಡಿದೆ. ಆದ್ದರಿಂದ ತನಿಖಾ ಸಮಿತಿ ರಚಿಸಿ ಭ್ರಷ್ಟಾಚಾರ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಕಳೆದ ಎರೆಡು ವರ್ಷಗಳಿಂದ ಆನೆ ಕಂದಕ, ಸೋಲಾರ್ ಬೇಲಿ, ಅರಣ್ಯದೊಳಗೆ ಕೆರೆ ಅಭಿವೃದ್ಧಿ, ಗಿಡ ನೆಡುವ ಕಾರ್ಯಕ್ರಮ, ಬ್ಯಾರಿಕೇಡ್ ಹಾಕುವ ಮತ್ತು ದುರಸ್ತಿ ಮಾಡುವ ನೆಪದಲ್ಲಿ ಕೋಟ್ಯಾಂತರ ರೂ ಲೂಟಿಯಾಗಿದೆ. ಇಂತಹ ಹಲವು ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿದೆ. ಆದ್ದರಿಂದ ಸೂಕ್ತ ತನಿಖಾ ಸಮಿತಿ ರಚಿಸಿ ಭ್ರಷ್ಟರ ಬಂಡವಾಳವನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲೆಗೆ ವರ್ಗಾವಣೆ ನೆಪದಲ್ಲಿ ಬರುವ ಕೆಲವು ಅಧಿಕಾರಿಗಳು ಸೋಮಾರಿಗಳಾಗಿದ್ದಾರೆ. ಸುಖಾಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಕೆಲಸ ಮಾಡಲು ಆಸಕ್ತಿ ಇಲ್ಲದವರು ಕೊಡಗು ಬಿಟ್ಟು ಹೋಗಿ ಎಂದು ಮನವಿ ಮಾಡಿದ ಅವರು, ಆನೆ, ಹುಲಿ ದಾಳಿಯಾದ ಸಂದರ್ಭದಲ್ಲೂ ಇವರಿಂದ ಸೂಕ್ತ ಸ್ಪಂಧನೆಯಿಲ್ಲ. ಹುಲಿ, ಆನೆ ಸಂಚಾರದ ಮಾಹಿತಿ ಇದ್ದರೂ ಕೂಡ ಯಾವುದೇ ಕ್ರಮ ವಹಿಸುತ್ತಿಲ್ಲ. ಘಟನೆ ನಡೆದ ನಂತರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಾರೆ ಎಂದ ಆರೋಪಿಸಿದರು.
ಇಂದು ಜಿಲ್ಲೆಯಲ್ಲಿ ಕಾಡಾನೆಯಿಂದ ಉಪಟಳವಾಗುತ್ತಿಲ್ಲ. ಕಳೆದ ೨೦-೩೦ ವರ್ಷಗಳಿಂದ ತೋಟದಲ್ಲೇ ಬೀಡುಬಿಟ್ಟಿರುವ ಆನೆಗಳು ಇಂದು ಬೆಳೆಹಾನಿ, ಜೀವಹಾನಿ ಮಾಡುತ್ತಿದೆ. ಇವುಗಳನ್ನು ಕಾಡಿಗೆ ಅಟ್ಟಿದರು ಮತ್ತೆ ತೋಟಕ್ಕೆ ಸೇರ್ಪಡೆಯಾಗುತ್ತಿದೆ. ಆದ್ದರಿಂದ ಇವುಗಳನ್ನು ಸೆರೆಹಿಡಿದು ಪುನರ್ವತಿಗೆ ಸೇರ್ಪಡೆ ಮಾಡಬೇಕಾಗಿದೆ. ಇದರ ಜತೆಗೆ ಕಾಡಿನಲ್ಲಿ ಆನೆಗಳಿಗೆ ಬೇಕಾದ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ ಎಂದರು.
ಬಿರುನಾಣಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅನುಮತಿ ನೀಡಿ ೨ ತಿಂಗಳು ಕಳೆದಿದೆ. ಆದರೂ ಕ್ರಮವಹಿಸದೇ ಅಧಿಕಾರಿಗಳು ಮೌನವಾಗಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ವಿಶೇಷ ದಳ ರಚಿಸುವ ಅಗತ್ಯವಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಆನೆಗಳ ಪುನರ್ವಸತಿಗೆ ಯೋಜನೆ ಕೈಗೊಂಡಿದೆ. ಇದೊಂದು ವೈಜ್ಞಾನಿಕ ಯೋಜನೆಯಾಗಿದೆ. ಇದು ಫಲಪ್ರದವಾಗಬೇಕಾದರೆ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು, ನಾಗರೀಕರು ಒಮ್ಮತದ ಸಹಕಾರ ನೀಡಬೇಕಾಗಿದೆ. ಅಲ್ಲದೇ, ಕರ್ನಾಟಕ ಮತ್ತು ಕೇಂದ್ರ ಅರಣ್ಯ ಕಾನೂನುಗಳಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗಿದೆ ಎಂದು ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.


